ಡಾ. ಸುಮತೀಂದ್ರ ನಾಡಿಗ (ಮೇ ೪, ೧೯೩೫ - ಆಗಸ್ಟ್ ೭, ೨೦೧೮) ಕನ್ನಡ ನಾಡಿನ ಮಹತ್ವದ ಸಾಹಿತಿಗಳಲ್ಲೊಬ್ಬರೆನಿಸಿದ್ದಾರೆ. == ಜೀವನ == ಕನ್ನಡದ ಪ್ರಮುಖ ಕವಿ ಮತ್ತು ವಿಮರ್ಶಕರಾಗಿ ಪ್ರಸಿದ್ಧರಾಗಿರುವ ಡಾ. ಸುಮತೀಂದ್ರ ನಾಡಿಗರು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಮೇ ೪, ೧೯೩೫ರಂದು ಜನಿಸಿದರು. ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯಗಳ ಪ್ರತಿಭಾವಂತ ವಿದ್ಯಾರ್ಥಿಯಾದ ನಾಡಿಗರು ಮೈಸೂರು ವಿಶ್ವವಿದ್ಯಾನಿಲಯದಿಂದ ಮತ್ತು ಅಮೆರಿಕದ ಫಿಲೆಡೆಲ್ಫಿಯಾ ವಿಶ್ವವಿದ್ಯಾಲಯಗಳಿಂದ ಇಂಗ್ಲಿಷ್ ಎಂ. ಎ. ಪದವಿಯನ್ನು ಪಡೆದರು. ೧೯೮೫ರಲ್ಲಿ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಡಾಕ್ಟರೇಟ್ ಪಡೆದುಕೊಂಡ ನಾಡಿಗರು ತಮ್ಮ ಪ್ರೌಢ ಪ್ರಬಂಧಕ್ಕಾಗಿ ಆರಿಸಿಕೊಂಡಿದ್ದ ವಿಷಯ ‘ಬೇಂದ್ರೆಯವರ ಕಾವ್ಯದ ವಿಭಿನ್ನ ನೆಲೆಗಳು’. ಬೇಂದ್ರೆ, ಗೋಪಾಲಕೃಷ್ಣ ಅಡಿಗ ಮತ್ತು ಕೆ. ಎಸ್. ನರಸಿಂಹಸ್ವಾಮಿಯವರ ಕಾವ್ಯದ ಬಗ್ಗೆ ಸುಮತೀಂದ್ರ ನಾಡಿಗರು ವಿಶೇಷವಾದ ಅಧ್ಯಯನ ನಡೆಸಿದ್ದಾರೆ. == ಸಾಹಿತ್ಯ == ಅಧ್ಯಾಪನದ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಾ ಬಂದಿರುವ ಸುಮತೀಂದ್ರ ನಾಡಿಗರು ಕಾವ್ಯ, ಸಣ್ಣಕಥೆ, ವಿಮರ್ಶೆ, ಅನುವಾದ ಪ್ರಕಾರಗಳಲ್ಲಿ ತಮ್ಮ ಅಮೂಲ್ಯ ಕೊಡುಗೆಗಳನ್ನು ಸಲ್ಲಿಸಿದ್ದಾರೆ. === ಕವನ ಸಂಕಲನ === ಜಡ ಮತ್ತು ಚೇತನ. ಪಂಚಭೂತಗಳು. ನಟರಾಜ ಕಂಡ ಕಾಮನಬಿಲ್ಲು. ಕುಹೂ ಗೀತ. ತಮಾಷೆ ಪದ್ಯಗಳು. ದಾಂಪತ್ಯ ಗೀತ. ಭಾವಲೋಕ. ಉದ್ಘಾಟನೆ. ಕಪ್ಪು ದೇವತೆ. ನಿಮ್ಮಪ್ರೇಮಕುಮಾರಿಯ ಜಾತಕ. ಮುಂತಾದ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವುಗಳ ಪೈಕಿ ‘ಪಂಚಭೂತಗಳು’ ಮತ್ತು ‘ದಾಂಪತ್ಯ ಗೀತ’ ಬಹಳ ಪ್ರಮುಖವಾಗಿದ್ದು, ಇಂಗ್ಲಿಷ್ ಮತ್ತು ಭಾರತದ ಹಲವಾರು ಪ್ರಾಂತೀಯ ಭಾಷೆಗಳಿಗೆ ಅನುವಾದಗೊಂಡಿವೆ. ಸುಮತೀಂದ್ರ ನಾಡಿಗರ ಈ ಸಾಹಿತ್ಯ ಕಾಯಕವು ನಾಡಿನ ಗಣ್ಯ ಸಾಹಿತಿಗಳು ಮತ್ತು ವಿದ್ವಾಂಸರ ಮೆಚ್ಚುಗೆ ಪಡೆದಿವೆ. === ಸಾಹಿತ್ಯವಿಮರ್ಶೆ === ಮೌನದಾಚೆಯ ಮಾತು. ನಾಲ್ಕನೆಯ ಸಾಹಿತ್ಯ ಚರಿತ್ರೆ. 5ನೆಯ ಸಾಹಿತ್ಯ ಚರಿತ್ರೆ. ಮತ್ತೊಂದು ಸಾಹಿತ್ಯ ಚರಿತ್ರೆ. ಅಡಿಗರು ಮತ್ತು ನವ್ಯಕಾವ್ಯ. ವಿಮರ್ಶೆಯ ದಾರಿಯಲ್ಲಿ. ಹೀಗೊಂದು ಸಾಹಿತ್ಯ ಚರಿತ್ರೆ. ಇನ್ನೊಂದು ಸಾಹಿತ್ಯ ಚರಿತ್ರೆ. ಕಾವ್ಯ ಎಂದರೇನು ? - ಮುಂತಾದವು ನಾಡಿಗರ ವಿಮರ್ಶಾ ಕೃತಿಗಳು. === ಕಥಾ ಸಂಕಲನ === ಗಿಳಿ ಮತ್ತು ದುಂಬಿ. ಕಾರ್ಕೋಟಕ. ಸ್ಥಿತಪ್ರಜ್ಞ. ಆಯ್ದ ಕಥೆಗಳು ಎಂಬ ಕೃತಿ ಬೆಂಗಳೂರು ವಿಶ್ವವಿದ್ಯಾನಿಲಯದ ಪದವಿ ತರಗತಿಗಳಿಗೆ ಪಠ್ಯವಾಗಿತ್ತು. === ಮಕ್ಕಳ ಸಾಹಿತ್ಯ === ಮಕ್ಕಳ ಸಾಹಿತ್ಯದಲ್ಲೂ ವಿಪುಲ ಕೃಷಿ ನಡೆಸಿರುವ ನಾಡಿಗರು, ‘ಡಕ್ಕಣಕ್ಕ ಡಕ್ಕಣ’, ‘ಧ್ರುವ ಮತ್ತು ಪ್ರಹ್ಲಾದ’, ‘ದಿಡಿಲಕ್ ದಿಡಿಲಕ್’, ‘ಗೂಬೆಯ ಕಥೆ’, ‘ಇಲಿ ಮದುವೆ’, ‘ಗಾಳಿಪಟ’, ‘ಸಾಹಸ(ಸರಣಿ ಕತೆಗಳು)’ ಮುಂತಾದ ಕೃತಿಗಳನ್ನೂ, ‘ಹನ್ನೊಂದು ಹಂಸಗಳು’ ಎಂಬ ಮಕ್ಕಳ ನಾಟಕವನ್ನೂ ಬರೆದಿದ್ದಾರೆ. === ಸಾಹಿತ್ಯ ರಚನಾಸಕ್ತರಿಗಾಗಿ === ಸುಮತೀಂದ್ರ ನಾಡಿಗರ 'ಕಾವ್ಯವೆಂದರೇನು?' ಕೃತಿ ‘ಕವಿತೆ ಬರೆಯುವುದು ಹೇಗೆ?’ ಎನ್ನುವುದನ್ನು ಕುರಿತ ಕೆಲವು ಉಪಯುಕ್ತ ಸೂಚನೆಗಳನ್ನು ಒಳಗೊಂಡ ಕೃತಿ. ಕಾವ್ಯದ ಹಾದಿಯಲ್ಲಿ ಮೊದಲ ಹೆಜ್ಜೆಗಳನ್ನಿಡುತ್ತಿರುವ ತರುಣ ಕವಿಗಳಿಗೆ, ನಾಡಿಗರು ಹೇಳಿದ ಹಲವು ಮೌಲಿಕವಾದ ‘ಮೊದಲ ಪಾಠ’ಗಳು ಇಲ್ಲಿವೆ. ಕವಿ ಎಂದರೇನು? ಕವಿತೆಯ ಪರಿಕರಗಳು ಯಾವುವು? ಕವಿಯ ಅನುಭವದ ಸ್ವರೂಪವೇನು? ಕವಿತೆಯೊಂದನ್ನು ಅರ್ಥ ಮಾಡಿಕೊಳ್ಳುವುದು, ಆಸ್ವಾದಿಸುವುದು, ವಿಶ್ಲೇಷಿಸುವುದು ಹೇಗೆ? – ಇತ್ಯಾದಿ ಹಲವು ಹತ್ತು ಸಂಗತಿಗಳನ್ನು ನಾಡಿಗರು ತಮ್ಮ ಸ್ವಾನುಭವದ ಮೂಲಮಾನದಲ್ಲಿ, ಅತ್ಯಂತ ಆತ್ಮೀಯವಾಗಿ ಹಾಗೂ ತಿಳಿಯಾಗಿ ನಿರೂಪಿಸಿರುವುದು ಈ ಕೃತಿಯ ವೈಶಿಷ್ಯವಾಗಿದೆ. === ಅನುವಾದ === ಚಾರ್ಲ್ಸ್ ಡಿಕನ್ಸನ -ಹಾರ್ಡ್ ಟೈಮ್ಸ್(ವೇಣುಗೋಪಾಲ ಸೊರಬ ಅವರೊಂದಿಗೆ). ಅರಿಷ್ಟೋಫೇನನ - ಬರ್ಡ್ಸ್. ರಸ್ಕಿನ್ನನ - ಅನ್ ಟು ದಿಸ್ ಲಾಸ್ಟ್. ಸ್ಟ್ರಿಂಡ್ ಬರ್ಗನ -ಮಿಸ್ ಜೂಲಿ. ಅಯೋನೆಸ್ಕೊನ - ಬೊಕ್ಕ ತಲೆಯ ನರ್ತಕಿ. . ರಾಥಾನಾಥ್ ರಾಯಿ- ಸಿಂಧಿ ಸಾಹಿತ್ಯ ಚರಿತ್ರೆ. ಮುಂತಾದ ಕೃತಿಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ತಂದಿರುವುದಲ್ಲದೆ, ಬಂಗಾಳಿ ಭಾಷೆಯಿಂದ ರವೀಂದ್ರನಾಥ ಟಾಗೋರರ ‘ತಿನ್ ಸಂಗಿ’, ನರೇಂದ್ರನಾಥ ಚಕ್ರವರ್ತಿಯವರ ‘ಉಲಂಗ್ ರಾಜಾ’, ಬಂಗಾಳದ ಕವಿತೆಗಳು ಮುಂತಾದವುಗಳನ್ನು ಕನ್ನಡಕ್ಕೆ ಅನುವಾದಿಸಿಕೊಟ್ಟಿದ್ದಾರೆ. === ಇಂಗ್ಲಿಷ್ ಕೃತಿಗಳು === ಇಂಗ್ಲಿಷ್ ಭಾಷೆಯಲ್ಲಿ ಸುಮತೀಂದ್ರ ನಾಡಿಗರ ಪ್ರಮುಖ ಕೃತಿಗಳೆಂದರೆ ‘ ’, ವೀರಪ್ಪ ಮೊಯ್ಲಿಯವರ ಕಾದಂಬರಿ ಅನುವಾದಿತ ‘ ’, ಪಿ. ಶ್ರೀನಿವಾಸ ರಾವ್ ಅವರೊಂದಿಗೆ ‘ ’, ‘ ’, ‘ . . ’, ‘20th ’, ‘ ( . . )’, ‘ ( . )’, ‘ . ’, ‘ . . ' ’ ಮುಂತಾದವು. == ಬಹುಭಾಷಾ ಪಾಂಡಿತ್ಯ == ಭಾರತದ ಹಲವಾರು ಭಾಷೆಗಳನ್ನು ಬಲ್ಲ ನಾಡಿಗರಿಗೆ (ಕನ್ನಡ, ಹಿಂದಿ, ಮರಾಠಿ, ಕೊಂಕಣಿ, ಬಂಗಾಳಿ) ಭಾರತೀಯ ಸಾಹಿತ್ಯದ ಅತ್ಯಂತ ನಿಕಟ ಪರಿಚಯವಿದೆ. == ಪ್ರಶಸ್ತಿ ಗೌರವಗಳು == ಸುಮತೀಂದ್ರ ನಾಡಿಗರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದಿನಕರ ಪ್ರತಿಷ್ಠಾನ ಪ್ರಶಸ್ತಿ, ವಿ. ಎಂ. ಇನಾಂದಾರ್ ಪ್ರಶಸ್ತಿ, ಎಂ. ವಿ. ಸೀ. ಪುರಸ್ಕಾರ ಮುಂತಾದ ಹಲವಾರು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿದ್ದಾರೆ. 1996-1999 ಅವಧಿಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟಿನ ಅಧ್ಯಕ್ಷರಾಗಿದ್ದ ನಾಡಿಗರನ್ನು ಹರಿದ್ವಾರದ ಗುರುಕುಲ ಕಾಂಗ್ಡಿ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. == ನಿಧನ == ನಾಡಿಗರು ೦೭ ಆಗಸ್ಟ್ ೨೦೧೮ ರಂದು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಹೃದಯ, ಕಿಡ್ನಿ ಮತ್ತು ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ೮೩ ವರ್ಷ ವಯಸ್ಸಾಗಿತ್ತು.. == ಪೂರಕ ಓದಿಗೆ == 08 ಆಗಸ್ಟ್ 2018, ;;ರಘುನಾಥ ಚ.ಹ ;; ಕನ್ನಡ ಕಾವ್ಯಲೋಕದ ಸದಾಪು ಗಿಡ ಪ್ರಜಾವಾಣಿ; 26 ಜೂನ್ 2016, ;; ಡಿಡಿಲಕ್ ಡಿಡಿಲಕ್ ಅಜ್ಜ == ಉಲ್ಲೇಖಗಳು ==